ಭಟ್ಕಳ, ನವೆಂಬರ್ 15: ಬಕ್ರೀದ್ ಹಬ್ಬ ಬಳಿಬರುತ್ತಿದ್ದಂತೆ ಹಬ್ಬದ ಸಲುವಾಗಿ ಕುರ್ಬಾನಿ ನೀಡಲು ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಕೆಲವು ಹಿಂದೂ ಸಂಘಟನೆಗೆ ಸೇರಿದ ಯುವಕರು ರಸ್ತೆಯಲ್ಲಿ ತಡೆದು ವಾಹನದಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ಜಾನುವಾರುಗಳನ್ನು ವಶಪಡಿಸಿರುವ ವರದಿಯಾಗಿದೆ.
ಬಳಿಕ ಹಿಂದೂ ಸಂಘಟನೆಯ ಸದಸ್ಯರು ಈ ವಿಷಯವನ್ನು ಪೋಲೀಸರಿಗೆ ತಿಳಿಸಿ ಜಾನುವಾರುಗಳನ್ನು ಪೋಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಬೆಳವಣಿಗೆಯಿಂದ ಉದ್ರಿಕ್ತರಾದ ಮುಸ್ಲಿಂ ಯುವಕರು ಭಟ್ಕಳದ ಮಜ್ಲಿಸ್-ಎ-ಇಸ್ಲಾಹ್-ವ-ತಂಜೀಂ ಸಂಘಟನೆಯ ಸಹಕಾರದೊಂದಿಗೆ ಶಾಂತಿಯುತ ಪ್ರತಿಭಟನೆ ನಡೆಸಿ ನಿನ್ನೆಯಿಂದ ಭಟ್ಕಳ ಬಂದ್ ಗೆ ಕರೆ ನೀಡಿದ್ದಾರೆ. ಬಳಿಕ ಭಟ್ಕಳ ಪೋಲೀಸ್ ಸ್ಟೇಷನ್ ಎದುರು ಸಂಘಟನೆಯ ಮುಖ್ಯಸ್ಥರು ಹಾಗೂ ಮುಖಂಡರ ನೇತೃತ್ವದಲ್ಲಿ ಭಟ್ಕಳ ಪೋಲೀಸ್ ಠಾಣೆಯುದುರು ಧರಣಿ ನಡೆಸಲಾಯಿತು.



ಬಳಿಕ ಮುಸ್ಲಿಂ ಮುಖಂಡರು ಪೋಲೀಸ್ ಡೆಪ್ಯುಟಿ ಎಸ್. ಪಿ ಯವರನ್ನು ಭೇಟಿಯಾಗಿ ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕಾನೂನು ಪ್ರಕಾರ ಸಾಗಿಸುತ್ತಿದ್ದ ಜಾನುವಾರುಗಳನ್ನು ಕೂಡಲೇ ಬಿಡುಗಡೆಗೊಳಿಸಿ ಮುಂಬರುವ ಈದ್ ಆಚರಣೆಯನ್ನು ಸಂಭ್ರಮ ಹಾಗೂ ಶಾಂತಿಯುತವಾಗಿ ಆಚರಿಸಲು ಅನುವುಮಾಡಿಕೊಡಲು ನಿವೇದಿಸಿಕೊಳ್ಳಲಾಯ್ತು. ಈ ಶಾಂತಿಯುತ ಪ್ರತಿಭಟನೆಗೆ ಭಟ್ಕಳದ ಸಕಲ ಅಂಗಡಿಗಳು ಮುಚ್ಚಿ ತಮ್ಮ ಬೆಂಬಲವನ್ನು ಸೂಚಿಸಿದವು. ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಕೋಪೋದ್ರಿಕ್ತ ಬಣದಿಂದ ಆಗುವ ಯಾವುದೇ ಅನಾಹುತಕ್ಕೆ ಪೋಲೀಸರೇ ಕಾರಣರಾಗಬಹುದು ಎಂದು ಮುಖಂಡರು ಸೂಚ್ಯವಾಗಿ ತಿಳಿಸಿದರು.

ನಿನ್ನೆಯಿಂದ ನಗರದಲ್ಲಿ ಸೆಕ್ಷನ್ ೧೪೪ ಹೇರಲಾಗಿದ್ದು ಭಾನುವಾರ ಸಂಜೆಯವರೆಗೂ ನಿಷೇದಾಜ್ಞೆ ಮುಂದುವರಿಯಲಿದೆ.
ಮುಸ್ಲಿಂ ಮುಖಂಡರ ಅಹವಾಲುಗಳನ್ನು ಸ್ವೀಕರಿಸಿದ ಡೆ.ಎಸ್.ಪಿ. ಡಾ. ವೇದಮೂರ್ತಿಯವರು ಈ ಪ್ರಕರಣವನ್ನು ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಲಾಗುವುದು ಹಾಗೂ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ ವಶಪಡಿಸಿಕೊಳ್ಳಲಾದ ಜಾನುವಾರುಗಳು ಕೇವಲ ನ್ಯಾಯಾಲಯದ ಆದೇಶದ ಮೇರೆಗೆ ಮಾತ್ರ ಬಿಡುಗಡೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.


ನಗರದಲ್ಲಿ ಧರ್ಮದ ಹೆಸರಿನಲ್ಲಿ ಧಾಳಿಗಳನ್ನು ನಡೆಸುವ ಭಜರಂದದಳ ಅಥವಾ ಯಾವುದೇ ಸಂಘಟನೆಯಾಗಲಿ, ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ತಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಭಟ್ಕಳ ಸರ್ಕಲ್ ಪೋಲೀಸ್ ಇನ್ಸ್ ಪೆಕ್ಟರ್ ಶ್ರೀ ಗುರು ಮಾಥುರ್ ಹಾಗೂ ಇತರ ಹಿರಿಯ ಪೋಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಪೋಲೀಸ್ ವರದಿಗಾಗರ ಕ್ಯಾಮರಾ ಕಸಿಯಲು ಯತ್ನ:
ಪೋಲೀಸ್ ಠಾಣೆಯೆದುರು ಶಾಂತಿಯುತ ಧರಣಿ ನಡೆಸುತ್ತಿದ್ದ ಮುಸ್ಲಿಂ ಯುವಕರ ವೀಡಿಯೋ ಚಿತ್ರಣ ನಡೆಸುವಂತೆ ಪೋಲೀಸರು ಖಾಸಗಿ ವಿಡಿಯೋಗ್ರಾಫರ್ ಒಬ್ಬರಿಗೆ ಸೂಚಿಸಿದ್ದ ಪ್ರಕಾರ ವೀಡಿಯೋ ಚಿತ್ರೀಕರಿಸುತ್ತಿದ್ದವನನ್ನು ಕಂಡು ಪ್ರತಿಭಟನಾಕಾರರು ಉದ್ರಿಕ್ತರಾದರು. ಕೆಲವರು ವೀಡಿಯೋ ಚಿತ್ರೀಕರಣವನ್ನು ವಿರೋಧಿಸಿ ಕ್ಯಾಮೆರಾ ಕಿತ್ತುಕೊಳ್ಳಲು ಮುಂದಾದರು. ಹಲವರು ಪೋಲೀಸ್ ಠಾಣೆಯ ಮೇಲೆ ಕಲ್ಲುಗಳನ್ನೂ ಎಸೆದರು.
ತಡೆಯಲು ಬಂದ ಕೆಲವು ಪೋಲೀಸ್ ಅಧಿಕಾರಿಗಳಿಗೂ ಗಾಯವಾಗಿದೆ. ಪೋಲೀಸ್ ಜೀಪ್ ಡ್ರೈವರ್ ರಮೇಶ್, ಸೂರಜ್ ಹಾಗೂ ಸಂದೀಪ್ ರವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.
ಆದರೆ ಕೂಡಲೇ ಸ್ಥಳಕ್ಕೆ ಧಾವಿಸಿದ ಮುಸ್ಲಿಂ ಮುಖಂಡರ ಸಾಂತ್ವಾನದ ಮೂಲಕ ಹೆಚ್ಚಿನ ಅನಾಹುತವಾಗುವುದನ್ನು ತಡೆಯಲಾಯಿತು.





ಭಜರಂಗ ದಳದ ನಾಲ್ವರ ಬಂಧನ:
ಪ್ರಕರಣ ದಾಖಲಾಗುತ್ತಿದ್ದ ಕೂಡಲೇ ಕಾರ್ಯಪ್ರವೃತ್ತರಾದ ಪೋಲೀಸರು ಭಜರಂಗ ದಳದ ನಾಲ್ವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಮುರ್ಡೇಶ್ವರದಲ್ಲಿದ್ದ ರಾಘವೇಂದ್ರ ಶೇಟ್, ಮಾರುತಿ ಮಡಿವಾಳ, ಕೃಷ್ಣ ಮಡಿವಾಳ ಮತ್ತು ಜಯಂತ್ ನಾಯಕ್ ಎಂಬುವರನ್ನು ಬಂಧಿಸಲಾಗಿದ್ದು ವಿಚಾರಣೆಗಾಗಿ ಭಟ್ಕಳಕ್ಕೆ ಕರೆತರಲಾಗಿದೆ.
ನಗರದಲ್ಲಿ ನಿಷೇದಾಜ್ಞೆ ಹೇರಿರುವ ಹಿನ್ನೆಲೆಯಲ್ಲಿ ಹದಿನೈದು ಅಧಿಕಾರಿಗಳು, ಕರ್ನಾಟಕ ಮೀಸಲು ಪೋಲೀಸ್ ಪಡೆಯ ಒಂದು ತುಕಡಿ, ಜಿಲ್ಲಾ ಮೀಸಲು ಪಡೆಯ ಒಂದು ತುಕಡಿಯನ್ನು ನಗರದಪ್ರದಕ್ಷಿಣೆಗಾಗಿ ನಿಯೋಜಿಸಲಾಗಿದೆ. ಮಂಗಳೂರಿನಿಂದ ಇನ್ನೆರೆಡು ಮೀಸಲು ಪಡೆಯ ತುಕಡಿಯನ್ನು ಕರೆಸಲಾಗಿದ್ದು ಇಂದು ಮುಂಜಾನೆ ಆಗಮಿಸುವ ನಿರೀಕ್ಷೆಯಿದೆ ಎಂದು ಡಾ. ವೇದಮೂರ್ತಿ ತಿಳಿಸಿದ್ದಾರೆ.

ಪರಿಸ್ಥಿತಿ ಶಾಂತ:
ನಗರದಲ್ಲಿ ಶನಿವಾರ ಬೆಳೆಗ್ಗೆಯಿಂದಲೇ ಶಾಲಾ ಕಾಲೇಜುಗಳು, ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದು ಪರಿಸರ ಶಾಂತಿಯುತವಾಗಿತ್ತು. ಬೆಳಿಗ್ಗೆ ಶಾಲೆಗೆ ಆಗಮಿಸಿದ ಮಕ್ಕಳನ್ನು ಹಿಂದಿರುಗಿ ಮನೆಗೆ ಕಳುಹಿಸಲಾಯ್ತು. ಅಂಗಡಿಗಳು ಇಡಿಯ ದಿನ ತೆರೆಯದೇ ಪ್ರತಿಭಟನೆಗೆ ಬೆಂಬಲ ಸೂಚಿಸಿದವು. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಎಂದು ಪೋಲೀಸರು ತಿಳಿಸಿದ್ದಾರೆ.
